Kanara DCC Bank
Your Website Title
CKYC
Your Website Title
Kanara DCC Bank

ನಮ್ಮ ಬ್ಯಾಂಕಿನ ಇತಿಹಾಸ:

19ನೇ ಶತಮಾನದ ಅಂತ್ಯ ಹಾಗೂ 20ನೇ ಶತಮಾನದ ಆರಂಭದ ದಶಕದಲ್ಲಿ ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಗ್ರಾಮೀಣ ಭಾಗಗಳಲ್ಲಿ ರೈತರು ಹಾಗೂ ಇತರರು ಸಾಲದಲ್ಲೇ ಹುಟ್ಟಿ, ಸಾಲದಲ್ಲೇ ಬೆಳೆದು, ಸಾಲದಲ್ಲೇ ಸಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು.  ರೈತರು ಖಾಸಗಿ, ಲೇವಾದೇವಿಗಾರರ ಹಿಡಿತದಲ್ಲಿ ನಲುಗಿ ಹೋಗಿದ್ದರು.  ಸರಕಾರದ ಕಾಯಿದೆಗಳೂ ಸಹ ಸಮಸ್ಯೆಗೆ ಪರಿಹಾರವಾಗಿ ಒದಗಿ ಬರಲಿಲ್ಲ. 

                ಮುಂಬಯಿ ಪ್ರಾಂತದ ದಕ್ಷಿಣ ತುತ್ತ ತುದಿಯ ಜಿಲ್ಲೆಯಾಗಿದ್ದ ಉತ್ತರ ಕನ್ನಡ ಜಿಲ್ಲೆಯಲ್ಲೂ ಸಹ 1905 ರಲ್ಲಿ ಸಹಕಾರಿ ಸಂಘಟನೆ ಪ್ರಾರಂಭವಾಗಿತ್ತು.  ಶಿರಸಿಯಲ್ಲಿ ಗ್ರಾಮೀಣ ಪತ್ತಿನ ಸಂಘ ಆ ಸಂದರ್ಭದಲ್ಲಿಯೇ ಸ್ಥಾಪನೆಯಾಗಿತ್ತು.

                ಈ ಸಂದರ್ಭದಲ್ಲಿ ಬೆಳ್ಳಿ ರೇಖೆಯಂತೆ ‘ತಾನು ಎಲ್ಲರಿಗಾಗಿ’ ‘ಎಲ್ಲರೂ ತನಗಾಗಿ’ ಎನ್ನುವ ನುಡಿಯಂತೆ, ಸ್ವಯಂ ಪ್ರೇರಿತರಾಗಿ ಸ್ವ-ಸಹಾಯ, ಪರಸ್ಪರ ಸಹಕಾರ, ಸುರಕ್ಷಿತ ಸಂಘಟನೆಯಾಗಿ ಸಹಕಾರಿ ಚಳುವಳಿ ಪ್ರಾರಂಭಗೊಂಡಿತು ಎಂದು ಹೇಳಬಹುದು.

 

Old Head office of our Bank.          

              71 ಸಹಕಾರಿ ಸಂಘಗಳಿರುವ ಈ ಜಿಲ್ಲೆಗೆ ಒಂದು ಮಧ್ಯವರ್ತಿ ಬ್ಯಾಂಕಿನ ಅವಶ್ಯಕತೆ ಇರುವುದನ್ನು ಮನಗಂಡು ಕಲೆಕ್ಟರ್ ಶ್ರೀ ಹೇಗ್ ಅವರ ಅಧ್ಯಕ್ಷತೆಯಲ್ಲಿ ಗಣ್ಯರೆಲ್ಲಾ ಸೇರಿ ತೀರ್ಮಾನಿಸಿದಂತೆ, ವ್ಯಕ್ತಿ ಮತ್ತು ಸಂಘಗಳು ಸದಸ್ಯರಿರುವ ಮಧ್ಯವರ್ತಿ ಹಣಕಾಸಿನ ಸಹಕಾರಿ ಸಂಸ್ಥೆ ಸ್ಥಾಪನೆಯಾಯಿತು.  ದಿನಾಂಕಃ 14-06-1920 ರಂದು ಕೆನರಾ ಡಿಸ್ಟ್ರಿಕ್ಟ್ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್ ಇದನ್ನು ನೋಂದಣಿ ಮಾಡಲಾಯಿತು.

                ಮೊದಲ ದಶಕದಲ್ಲಿ (1920-1930) ಶೇರು ಸಂಗ್ರಹಣೆ, ಠೇವು ಸಂಗ್ರಹಣೆ, ಪ್ರಾಥಮಿಕ ಸಹಕಾರಿ ಸಂಘಗಳೊಡನೆ ಸಂಪರ್ಕ, ಒಟ್ಟಾರೆ ಸಹಕಾರಿ ಸಂಘಟನೆ ಹಾಗೂ ಅಭಿವೃದ್ಧಿ ಬ್ಯಾಂಕಿನ ಮುಖ್ಯ ಉದ್ದೇಶವಾಗಿತ್ತು.  ಆದರೆ, ಆ ಕಾಲಕ್ಕೆ ಇದ್ದ ಎರಡು ಶಾಖೆಗಳಲ್ಲಿ ಸಮರ್ಪಕ ಕಾರ್ಯನಿರ್ವಹಣೆ ಆಗದೇ ಇದ್ದ ಕಾರಣ ಸಂಪೂರ್ಣ ಯಶಸ್ಸು ದೊರಕಲಿಲ್ಲ.

                ಎರಡನೇ ದಶಕದಲ್ಲಿ (1930-1940) ಸಹ ಜಾಗತಿಕ ಆರ್ಥಿಕ ಮುಗ್ಗಟ್ಟಿನಿಂದಾಗಿ ಸಹಕಾರಿ ಸಂಘಗಳು ದುರ್ದೆಶೆಗೀಡಾಗುವ ಪ್ರಸಂಗ ಬಂದೊದಗಿತು. 

                ಮೂರನೇ ದಶಕದಲ್ಲಿ (1940-1950) ಸಂಘಗಳನ್ನು ಪುನಶ್ಚೇತನಗೊಳಿಸಲು ಬ್ಯಾಂಕ್ ಪ್ರಯತ್ನಿಸಿತು.  ಈ ದಶಕದಲ್ಲಿ ಸಹಕಾರದ ಮೇಲೆ ಹೆಚ್ಚಿನ ಶ್ರದ್ಧೆ, ವಿಶ್ವಾಸಗಳು ವ್ಯಕ್ತವಾದವು.

                ಸ್ವಾತಂತ್ರ್ಯಾ ನಂತರದ ದಶಕಗಳಲ್ಲಿ ಸಹಕಾರ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ಉಂಟಾಯಿತು.  ಸಂವಿಧಾನ ಸ್ವೀಕೃತಿ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ಕಾರ್ಯಪ್ರವೃತ್ತವಾದ ಯೋಜನಾ ಆಯೋಗವೊಂದು ಕೃಷಿ ಉತ್ಪಾದನೆಯನ್ನು ಹೆಚ್ಚಿಸುವ  ಮಹತ್ಕಾರ್ಯದಲ್ಲಿ ಸಹಕಾರ ಸಂಘಗಳ ಪಾತ್ರ ಮುಖ್ಯ ಎಂಬುದನ್ನು ಅಭಿಪ್ರಾಯಪಟ್ಟಿತು.

                   ಮುಂದಿನ ದಶಕಗಳಲ್ಲಿ ಬ್ಯಾಂಕಿನ ಚಟುವಟಿಕೆಗಳು ವೈವಿಧ್ಯಮಯವಾಗಿ ಬೆಳೆದು ಇಡೀ ರಾಜ್ಯದಲ್ಲಿಯೇ ಶ್ರೇಷ್ಠ ಬ್ಯಾಂಕ್ ಎಂಬ ಹೆಸರನ್ನು ತನ್ನದಾಗಿಸಿಕೊಂಡಿತು.  ಆರನೇ ದಶಕದ ಸಂದರ್ಭದಲ್ಲಿ ಶ್ರೀ ಬಿ. ವೆಂಕಟಪ್ಪಯ್ಯ ಅವರ ನೇತೃತ್ವದಲ್ಲಿ ರಚಿತವಾದ ಅಖಿಲ ಭಾರತ ಗ್ರಾಮಾಂತರ ಪತ್ತಿನ ಪುನರ್ವಿಮರ್ಶೆ ಸಮಿತಿಯ ವರದಿಯ ಕಾರಣದಿಂದ ಸಹಕಾರ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ವಿಕಾಸ ಉಂಟಾಯಿತು.

                1987 ರಲ್ಲಿ ವಜ್ರ ಮಹೋತ್ಸವ ಆಚರಿಸಿಕೊಂಡ ಬ್ಯಾಂಕ್‍ಗೆ 1989 ರಲ್ಲಿ ರಿಜರ್ವ್ ಬ್ಯಾಂಕಿನಿಂದ ಲೈಸೆನ್ಸ್ ಪಡೆದ ಪ್ರಥಮ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಎಂಬ ಹೆಗ್ಗಳಿಕೆ ಪ್ರಾಪ್ತವಾಯಿತು.  ಎಂಟನೇ ದಶಕದ (1990-2000) ಅವಧಿಯಲ್ಲಿ ಎರಡು ಬಾರಿ ನಬಾರ್ಡ್‍ನಿಂದ ಬಹುಮಾನ ಪಡೆದ ಬ್ಯಾಂಕ್, ಒಂಭತ್ತನೇ ದಶಕದ (2000-2010) ಅವಧಿಯಲ್ಲಿ ಅಪೆಕ್ಸ್ ಬ್ಯಾಂಕಿನಿಂದ ಆರು ಸಲ ಮತ್ತು ನಬಾರ್ಡ್‍ನಿಂದ ಒಂದು ಸಲ ಬಹುಮಾನವನ್ನು ತನ್ನದಾಗಿಸಿಕೊಂಡಿತು.  ಹತ್ತನೇ ದಶಕದಲ್ಲಿ (2010-2020) ಬ್ಯಾಂಕಿನ ಇತಿಹಾಸದಲ್ಲಿ ಮೈಲುಗಲ್ಲೆನಿಸುವ ಸಂಗತಿಯಾಗಿ ಸಿ.ಬಿ.ಎಸ್. ನ್ನು ಅಳವಡಿಸಲಾಯಿತು.  RTGS/NEFT/SMS  ALERT/DIRECT  BENIFIT  TRANSFER/ATM/MOBILE BANKING VAN ಮುಂತಾದ ತಂತ್ರಜ್ಞಾನಾಧಾರಿತ ಸೇವೆಗಳನ್ನು ಅತ್ಯಂತ ಯಶಸ್ವಿಯಾಗಿ ಅಳವಡಿಸಲಾಯಿತು.

                ಹೀಗೆ ಶ್ರೀ ಪಿ. ಎನ್. ಪಂಡಿತ್ ರವರಿಂದ ಚಾಲನೆಗೊಳಲ್ಪಟ್ಟಿದ್ದ ಬ್ಯಾಂಕ್ ಶ್ರೀ ಎಸ್. ಪಿ. ಪಂಡಿತ್ ಅವರ ಮಾರ್ಗದರ್ಶನದಲ್ಲಿ ಮಹಾ ಹೆಮ್ಮರವಾಗಿ ಬೆಳೆದು, ಜಿ. ಎಸ್. ಹೆಗಡೆ, ಅಜ್ಜೀಬಳ, ಆರ್. ಎಸ್. ಭಾಗ್ವತ ರಂತಹ ಸಹಕಾರಿಗಳ ಪ್ರಯತ್ನದಿಂದಾಗಿ ಶತಮಾನವನ್ನು ಯಶಸ್ವಿಯಾಗಿ ಪೂರೈಸಿದೆ.  ಈ ನೂರು ವರ್ಷಗಳ ಅವಧಿಯಲ್ಲಿ 9 ಅಧ್ಯಕ್ಷರು, 15 ಉಪಾಧ್ಯಕ್ಷರು ಬ್ಯಾಂಕಿಗಾಗಿ ಕಾರ್ಯನಿರ್ವಹಿಸಿದ್ದಾರೆ.

New Building of our Head Office

                ಬ್ಯಾಂಕ್ ಪ್ರಾರಂಭದಿಂದಲೂ ಆಡಿಟ್ ‘ಅ’ ವರ್ಗದಲ್ಲಿಯೇ ಇದ್ದು, ಸತತವಾಗಿ ಲಾಭದಲ್ಲಿಯೇ ಕೆಲಸ ಮಾಡುತ್ತಿದೆ.  ಆದರ್ಶವಾದ ಸಹಕಾರಿ ಸಂಘಟನೆ, ದಕ್ಷ ಆಡಳಿತ, ಸೇವಾಕಾಂಕ್ಷಿಗಳಾದ ಸಿಬ್ಬಂದಿ ವರ್ಗ, ಬೆನ್ನೆಲುಬಾಗಿರುವ ಗ್ರಾಹಕರು, ನವೀನ ಯೋಜನೆಗಳ ಅನುಷ್ಠಾನ, ಈ ಎಲ್ಲಾ ಕಾರಣಗಳಿಂದಾಗಿ ಬ್ಯಾಂಕ್ 100 ವರ್ಷದ ದಾರಿಯನ್ನು ಯಶಸ್ವಿಯಾಗಿ ಕ್ರಮಿಸಿ ಶತಮಾನೋತ್ಸವ ಸಂಭ್ರಮವನ್ನು ಆಚರಿಸಿಕೊಂಡಿದೆ.  ಪ್ರಗತಿಯ ಮಾರ್ಗದಲ್ಲಿ ಇದೇ ರೀತಿ ಅನವರತವಾಗಿ ಚಲಿಸುವ ಧ್ಯೇಯ, ಆಶಯ ಮತ್ತು ನಂಬಿಗೆಯನ್ನು ಹೊಂದಿದೆ.

*******************************